ಸಕಾರಾತ್ಮಕ
ಮನೋಭಾವದಿಂದ ಯಶಸ್ಸು ಸಾಧ್ಯ
ಹೊಸಪೇಟೆ: ೫ ಆಗಸ್ಟ್ ೨೦೧೩
“ಜೀವನದಲ್ಲಿ ಯಶಸ್ಸು ಸಾಧಿಸಲು ಸಕಾರಾತ್ಮಕ ಮನೋಭಾವವನ್ನು ರೂಢಿಸಿಕೊಳ್ಳಿರಿ” ಎಂದು ವೈದ್ಯ
ಹಾಗೂ ವ್ಯಕ್ತಿ ವಿಕಸನ ತರಬೇತಿದಾರ ಡಾ.ಮುನಿವಾಸುದೇವ ರೆಡ್ಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ಬಿ.ಇ. ಪ್ರಥಮ
ವರ್ಷದ ವಿದ್ಯಾರ್ಥಿಗಳ ೨೦೧೩-೧೪ನೇ ಸಾಲಿನ ಪಠ್ಯಕ್ರಮವನ್ನು ಉಧ್ಘಾಟಿಸುವ ‘ಶುಭಾರಂಭ’
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
“ನೀವು ಆರಿಸಿಕೊಂಡಿರುವ ವೃತ್ತಿಯನ್ನು ಪ್ರೀತಿಸಿರಿ. ಇದರಿಂದ ನಿಮ್ಮ ವೃತ್ತಿಯಲ್ಲಿ ಪರಿಣತಿ ಹಾಗೂ ಪ್ರಭುತ್ವ ಗಳಿಸಲು ಸಾಧ್ಯವಾಗುತ್ತದೆ. ಶಿಕ್ಷಣ ಎಲ್ಲರಿಗೂ ಸಾಧ್ಯವಾಗುತ್ತಿರುವ ಇಂದಿನ ಯುಗದಲ್ಲಿ ಅನಕ್ಷರಸ್ಥರೆಂದರೆ ಓದು ಬರಹ ಬಾರದವರಲ್ಲ. ಯಾರು ಹೊಸತನ್ನು ಕಲಿಯುವುದನ್ನು ನಿಲ್ಲಿಸುವರೋ ಅವರನ್ನು ಅನಕ್ಷರಸ್ಥರೆನ್ನಬೇಕಾಗಿದೆ. ಕಲಿಯುವಿಕೆ ಜೀವನ ಪರ್ಯಂತ ನಡೆಯಬೇಕಾದ ಪ್ರಕ್ರಿಯೆ” ಎಂದು ಡಾ.ಮುನಿವಾಸುದೇವ ರೆಡ್ಡಿ ಹೇಳಿದರು.
ನಿತ್ಯದ ಬದುಕಿನಿಂದ ನಾವು ಪ್ರೇರಣೆಗಳನ್ನು ಪಡೆದು ಕೊಳ್ಳಬೇಕು. ನಾವು ಮತ್ತೊಬ್ಬರಿಗೆ
ಪ್ರೇರಣೆ ನೀಡಿದರೆ ನಮ್ಮೆಡೆಗೂ ಪ್ರೇರಣೆ ಹರಿದುಬರುತ್ತದೆ ಎಂದು ಯಶಸ್ಸಿಗೆ ಅಗತ್ಯವಾದ
ಗುಣಗಳನ್ನು ಗಾಂಧೀಜಿ, ಡಾ.ರಾಧಾಕೃಷ್ಣನ್, ಥಾಮಸ್ ಆಲ್ವಾ ಎಡಿಸನ್, ಸ್ವಾಮಿ ವಿವೇಕಾನಂದ, ಲೂಯಿ
ಬ್ರೇಲ್, ಅಬ್ದುಲ್ ಕಲಾಂ, ಸರ್ ಎಂ.ವಿಶ್ವೇಶ್ವರಯ್ಯ ಮುಂತಾದವರ ಜೀವನದ ಪ್ರಸಂಗಗಳನ್ನು ಉದಾಹರಿಸಿ
ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ವೀ.ವಿ.ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ್ ಮಾತನಾಡಿ
ತಾಂತ್ರಿಕತೆಯು ಶಿಕ್ಷಣದಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ವಿದ್ಯಾರ್ಥಿಗಳನ್ನು ಹಾಗೂ
ಪೋಷಕರನ್ನು ತಲುಪಲು ಕಾಲೇಜು ಆಡಳಿತ ಮಂಡಳಿಗಳಿಗೆ ಎಸ್.ಎಂ.ಎಸ್. ಮಲ್ಟಿಮೀಡಿಯಾಗಳು ಸಹಾಯಕವಾಗಿವೆ
ಎಂದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಗುಣಮಟ್ಟದ ಶಿಕ್ಷಣಕ್ಕೆ
ರಾಷ್ಟ್ರದಲ್ಲಿಯೇ ಹೆಸರುವಾಸಿಯಾಗಿದೆ ಎಂದರು.
ವೀ.ವಿ.ಸಂಘದ ಕಾರ್ಯದರ್ಶಿ ಗುರುಸಿದ್ಧ ಸ್ವಾಮಿ, ಆಡಳಿತ ಮಂಡಳಿ ಸದಸ್ಯ ಕೆ.ಬಿ ಶ್ರೀನಿವಾಸ್ ಸಭೆಯಲ್ಲಿ ಮಾತನಾಡಿದರು. ಆರಂಭದಲ್ಲಿ ವಿದ್ಯಾರ್ಥಿನಿ ಪ್ರಜ್ಞಾ ಪ್ರಾರ್ಥನೆ ಮಾಡಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅರವಿ ಬಸವನಗೌಡ ಸ್ವಾಗತಿಸಿದರು. ಪ್ರೊ. ಪ್ರಭುದೇವ ಬಿ,ಇ. ಪದವಿ ವ್ಯಾಸಂಗದ ನಿಯಮಾವಳಿಗಳನ್ನು ವಿದ್ಯಾರ್ಥಿ ಹಾಗೂ ಪೋಷಕರಿಗೆ ಪರಿಚಯಿಸಿದರು. ಡಾ. ಶರಣ ಬಸಮ್ಮ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪ್ರೊ.ಶಿವಪ್ರಕಾಶ್ ಸ್ವಾಮಿ ವಂದನಾರ್ಪಣೆ ಸಲ್ಲಿಸಿದರು. ಪ್ರಾಂಶುಪಾಲರಾದ ಪ್ರೊ.ಪಾರ್ವತಿ ಕಡ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸಿದ್ಧಲಿಂಗ ಮೂರ್ತಿ, ರೇವಣ ಸಿದ್ಧಪ್ಪ, ಸಾಲಿ ಸಿದ್ದಯ್ಯ ಸ್ವಾಮಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
No comments:
Post a Comment