Thursday, October 10, 2013

Life is a Long-list of Thanksgiving!

ನನಗಿಷ್ಟವಾದ ಲೇಖನ  -ಶಶಿಧರ


ಬದುಕು ಕೃತಜ್ಞತೆಗಳ ಪಟ್ಟಿ










ಬದುಕು ಎಂದರೆ ಸಾಧನೆಗಳ ಪಟ್ಟಿ. ಸಾಧಿಸಬೇಕಾದವುಗಳ ಪಟ್ಟಿ. ಕನಸುಗಳ ಪಟ್ಟಿ. ಕರ್ತವ್ಯಗಳ ಪಟ್ಟಿ. ಆದರೆ ಇದೆಲ್ಲಕ್ಕಿಂತ ಮುಖ್ಯವಾದದ್ದೊಂದಿದೆ. ಅದೆಂದರೆ ಬದುಕು ಕೃತಜ್ಞತೆಗಳ ಪಟ್ಟಿ. ನಾವು ಜ್ಞಾತಾಜ್ಞಾತರಿಗೆ ಕೃತಜ್ಞರಾಗಿರಬೇಕಾದ ಪಟ್ಟಿ. ಹೀಗೆ ಒಬ್ಬರಿಗೊಬ್ಬರು ಪರಸ್ಪರ ಕೃತಜ್ಞತಾ ಸರಪಳಿಯಂತಿರುವುದೇ ಜಗತ್ತು. ಇಲ್ಲಿ ಇಂಡಿಪೆಂಡೆಂಟ್ ಎನ್ನುವುದು ಇಲ್ಲವೇ ಇಲ್ಲ. ಎಲ್ಲವೂ ಇಂಟರ್‌ಡಿಪೆಂಡೆಂಟ್. ಇದು ಅತ್ಯುನ್ನತವಾದ ಜೀವನ ಮೀಮಾಂಸೆ.
‘A hundred times everyday I remind myself that my inner and outer life depend on the labours of other men, living and dead, and that I must exert myself in order to give same measure as I have received and am still receiving’.
-ಇದು ಖ್ಯಾತ ಭೌತವಿಜ್ಞಾನಿ, ದಾರ್ಶನಿಕ ಆಲ್ಬರ್ಟ್ ಐನ್‌ಸ್ಟೀನ್‌ನ ಒಳಗಿನ ಮಾತು. ನಮ್ಮ ಒಳಜಗತ್ತು ಮತ್ತು ಹೊರಜಗತ್ತು ಅದೆಷ್ಟೋ ಮಂದಿ ಬದುಕಿರುವವರ ಇಲ್ಲವೇ ತೀರಿಕೊಂಡಿರುವವರ ಶ್ರಮವನ್ನು ಅವಲಂಬಿಸಿದೆ. ನಮಗೆ ಬದುಕು ದಿನವೊಂದಕ್ಕೆ 86,೪೦೦ ಸೆಕೆಂಡುಗಳನ್ನು ಕೊಟ್ಟಿದೆ. ಆದರೆ ನಾವು ಒಂದೇ ಒಂದು ಸೆಕೆಂಡನ್ನು ಋಣಸ್ಮರಣೆಗಾಗಿ ಬಳಸಲಾರೆವು.
ನಾನು ಎಲ್ಲದಕ್ಕೂ ಅರ್ಹ ಎಂಬ ಸ್ವಕೇಂದ್ರಿತ ಪ್ರಜ್ಞೆ ಅಪಾಯಕಾರಿ. ನಾನು ಎಲ್ಲದಕ್ಕೂ ಅರ್ಹನಾಗಲು ಈ ವ್ಯಕ್ತಿ, ವಸ್ತು, ವಿಷಯಗಳು ಕಾರಣ ಎಂಬ ಋಣಪ್ರಜ್ಞೆ ತುಂಬಾ ಮುಖ್ಯವಾದದ್ದು. ಒಂದು ಸರಳ ಉದಾಹರಣೆ. ತುಂಬಾ ತಲೆನೋವು. ಒಂದು ಗುಳಿಗೆ ನುಂಗಿ ಬಿಸಿ ಕಾಫಿ ಕುಡಿಯುತ್ತೀರಿ. ಕೆಲವು ನಿಮಿಷಗಳಲ್ಲಿ ತಲೆನೋವು ಮಾಯವಾಗುತ್ತದೆ. ಗುಳಿಗೆಗೂ ಕಾಫಿಗೂ ನೀವು ಹಣ ಕೊಟ್ಟಿರಬಹುದು.
ಅದು ನಗಣ್ಯ. ಆ ಗುಳಿಗೆಯನ್ನು ಕಂಡುಹಿಡಿದವನಿಂದ ನಿಮ್ಮ ಕೈ ತಲುಪುವವರೆಗೆ ಅದೆಷ್ಟೋ ಕೈಗಳಿವೆ, ಮನಸ್ಸುಗಳಿವೆ. ಕಾಫಿ ಬೆಳೆದ ರೈತನಿಂದ ನಿಮ್ಮನ್ನು ತಲುಪುವವರೆಗೆ ಅದೆಷ್ಟೋ ಜನರಿದ್ದಾರೆ. ಅವರನ್ನು ನೆನೆಯುವುದು ಋಣಪ್ರಜ್ಞೆ. ಋಣಪ್ರಜ್ಞೆ ಎನ್ನುವುದು ಒಂದು ತನ್ಮಯ ಭಾವ. ಮೌನದಲ್ಲಿ ಸಂಭವಿಸುವಂಥದ್ದು. ಹೇಳಿಸಿಕೊಂಡವನಿಗೆ ತಲುಪದೆ ಇರಬಹುದು. ಆದರೆ ಅದು ಹೇಳುವವನ ಧನ್ಯತೆ.
ತುಂಬಾ ಜನರು ಕೃತಜ್ಞತೆ ಎಂಬುದನ್ನು ಅವರ ನೆಚ್ಚಿನ ದೇವರಿಗೆ ಅರ್ಪಿಸಿ, ತಮ್ಮ ಆಸುಪಾಸಿನಲ್ಲೇ ಇರುವ ನಿಜದ ಮನುಷ್ಯರನ್ನು ಮರೆಯುತ್ತಾರೆ. ದೇವರ ವಿಷಯದಲ್ಲಿ ಕೃತಜ್ಞತೆ ಎಂಬುದು, ಕ್ರಮೇಣ ಮಾಡಿದ ಪಾಪ ಮುಚ್ಚಿಡುವ ರಕ್ಷಾ ಕವಚದಂತೆ ಬದಲಾಗುತ್ತದೆ. ತನ್ನ ಸುತ್ತ ಕೆಲಸ ಮಾಡುವವರಿಗೆ ಸರಿಯಾಗಿ ಕೂಲಿ ಕೊಡದವನು ತಿರುಪತಿಗೆ ಹೋಗಿ ಚಿನ್ನದ ಕಿರೀಟ ತೊಡಿಸಿ ಬರುತ್ತಾನೆ. ತನ್ನ ಅಪ್ಪ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳದವನು, ಅವರ ಹೆಸರಿನಲ್ಲಿ ಅದ್ದೂರಿ ದೇವಸ್ಥಾನ ಕಟ್ಟಿಸಿ ಹೆಸರು ಕೆತ್ತಿಸಿಕೊಳ್ಳುತ್ತಾನೆ.
ಇದು ಋಣಪ್ರಜ್ಞೆ ಅಲ್ಲ. ಇದು ತೋರಿಕೆ. ಋಣಪ್ರಜ್ಞೆಗೆ ಧ್ಯಾನದ ನಿಲುಗಡೆ ಬೇಕು. ಆದರೆ ಈಗ ಎಲ್ಲೆಡೆ ಓಟ. ಎಡಬಲ ನೋಡದ ಓಟ. ಓಡುವವನ ಎದೆಬಡಿತದ ಲಯಕ್ಕೆ ಧ್ಯಾನಸ್ಥನ ಮನಸ್ಥಿತಿ ಅಸಂಭವ. ಈಗ ನಾನು ಬರೆಯುತ್ತಿದ್ದೇನೆ. ನೀವು ಓದುತ್ತಿದ್ದೀರಿ. ಈ ಕ್ಷಣಗಳು ನಮ್ಮ ನಡುವೆ ಒಂದು ಅನುಬಂಧವನ್ನು ಸೃಷ್ಟಿಸಿವೆ. ಬರೆಯುವುದು ಒಂದು ಋಣಪ್ರಜ್ಞೆ. ಓದುವುದೂ ಸಹ.
it is only with gratitude that life becomes rich’ ಎನ್ನುತ್ತಾನೆ, Dietrich Bonhoeffer (೧೯೦೬--–೧೯೪೫). ನೀವು ಋಣಿಗಳಾಗಿರಬೇಕಾದ ವ್ಯಕ್ತಿ, ಸಂಸ್ಥೆಗಳನ್ನು ಪಟ್ಟಿ ಮಾಡತೊಡಗಿ. ಗಾಬರಿಯಾಗುವಷ್ಟರ ಮಟ್ಟಿಗೆ ಆ ಪಟ್ಟಿ ಬೆಳೆಯುತ್ತದೆ. ನೀವು ತೀರಿಸಿರುವ ಋಣಗಳನ್ನು ಮರೆತುಬಿಡಿ. ಅದನ್ನು ನೆನಪಿಡುವುದು ನಿಮ್ಮ ಕೆಲಸವಲ್ಲ. ಅದು ಆ ತುದಿಯಲ್ಲಿರುವವರ ಕೆಲಸ. ನಿಜಕ್ಕೂ ನೀವು ನೆನಪಿಡಬೇಕಾದ್ದು ನಿಮ್ಮ ಋಣ ಸಲ್ಲಿಕೆಯ ಪಟ್ಟಿ ಮಾತ್ರ.
ನಾವೆಲ್ಲರೂ ಹಾಗೆ ಅಸೂಕ್ಷ್ಮರಾಗುತ್ತಾ ಹೋಗಿ, ಯಂತ್ರಗಳನ್ನು ಕಂಡು ಹಿಡಿದವರು ಯಂತ್ರದ ಬೆಲ್ಟ್ ಆಗಿ ಸುಮ್ಮನೆ ಸುತ್ತತೊಡಗುತ್ತೇವೆ. Christian Science Hymnal ಹೇಳುತ್ತಾನೆ : ‘Gratitude is riches, complaint is poverty’. ದೂರುಗಳಿಲ್ಲದ, ಲೋಪಗಳಿಲ್ಲದ, ಕೊರತೆ ಇಲ್ಲದ ಮಾನವ ಸಮುದಾಯ ಎಲ್ಲೂ ಇಲ್ಲ. ಆದರೆ ಒಂದಾದರೂ ದೂರನ್ನೂ ನೀನು ಹೇಗೆ ನಿನ್ನ ಓದಿನಿಂದ, ಅನುಭವದಿಂದ, ಪರಿಶ್ರಮದಿಂದ, ಪ್ರಾಮಾಣಿಕವಾಗಿ ಸರಿಪಡಿಸಬಲ್ಲೆ ಎಂಬುದು ಬಹಳ ಮುಖ್ಯ.

ನಮಗೆ ದೂರು ಹೇಳಲು ಇಲ್ಲಿ ಸಾವಿರ ಸಂದರ್ಭಗಳಿವೆ. ನಾವೆಲ್ಲ ವ್ಯರ್ಥ, ತಿರಸ್ಕೃತ ದೂರು ಅರ್ಜಿಗಳ ಕಸದ ಬುಟ್ಟಿಯಂತೆಯೇ ಇದ್ದೇವೆ. ಬೆಳಿಗ್ಗೆ ಎದ್ದಾಗಿನ ಅರುಣೋದಯದ ಸೌಂದರ್ಯವನ್ನು, ಹಕ್ಕಿಗಳ ಚಿಲಿಪಿಲಿಯನ್ನೂ, ಹಾಲು–-ಪೇಪರ್ ಹುಡುಗರ ಅದಮ್ಯ ಜೀವನೋತ್ಸಾಹವನ್ನೂ ಸವಿಯಲು ಈ ಕಸದ ಬುಟ್ಟಿ ಬಿಡುವುದಿಲ್ಲ. ಶುರುವಾಗುವುದೇ ದೂರಿನ ಕಿರಿಕಿರಿಯಿಂದ. ಅಮ್ಮಾ ಹೇಗಿದ್ದಿ? ಎಂದು ತುಂಬು ಕಂಠದಿಂದ, ತುಂಬು ಪ್ರೀತಿಯಿಂದ ಕೇಳಬೇಕೆನಿಸಿದರೂ ನಮ್ಮ ದೈತ್ಯ ವೇಗ, ಬಗೆಹರಿಯದ ದೂರುಗಳ ಪಟ್ಟಿ ಅಮ್ಮನನ್ನು ಮರೆಸುತ್ತದೆ. 
Tecumseh (೧೭೬೮-–-೧೮೧೩)ಎಂಬ ರೆಡ್ ಇಂಡಿಯನ್ನರ ನಾಯಕ: ‘when you arise in the morning, give thanks for your life and strength. Give thanks for your food and the joy of living. If you see no season for giving thanks, the fault lies with your self’ ಎನ್ನುತ್ತಾನೆ. ಬೆಳಗಿನ ಹೊತ್ತು ಸೂರ್ಯನೊಂದಿಗೆ ಸಂವಾದ ಸೃಷ್ಟಿಸಿಕೊಳ್ಳುವುದು ಒಂದು ಅದ್ಬುತ. ಇದನ್ನು ಹಲವಾರು ವರ್ಷಗಳಿಂದ ನಾನು ಮಾಡುತ್ತಿದ್ದೇನೆ. ಬಸ್‌ಸ್ಟಾಪಿಗೆ ನನ್ನ ಮಗಳು ಸಿಹಿ ಪುಟ್ಟಿಯನ್ನು ಬಿಡುವ ಈ ಕಾಯಕ ಬಲು ರೋಚಕ. ಸೂರ್ಯ ಕೇಳಿಸಿಕೊಳ್ಳುತ್ತಾನೋ ಇಲ್ಲವೋ. ನಾವಿಬ್ಬರೂ ಹಾಡುತ್ತೇವೆ :
ಸೂರ್ಯ ಬಂದ, ಸೂರ್ಯ ಬಂದ, ಸೂರ್ಯ ಬಂದ !
ನನಗು, ನಿನಗು ಎಲ್ಲರಿಗೂ ಬೆಳಕು ತಂದ !
ಅವನ ಕಿರಣ ಆಭರಣ; ನಮಗೆ ಭೂಷಣ
ಜಗದ ಮೊಗದ ನಗುವಿಗೆ ಅವನೇ ಕಾರಣ !
ಪ್ರತಿವರ್ಷ ಈ ಹಾಡು ಬದಲಾಗುತ್ತದೆ. ಹೊಸ ಹಾಡು ಕಟ್ಟುವುದು ನನಗಿಷ್ಟ. ನಾವು ಹಾಡುತ್ತಾ ಹೋಗುವುದು ಅನೇಕರಿಗೆ funny ಆಗಿ ಕಾಣಿಸಬಹುದು. ವೈಚಾರಿಕ ಪ್ರಜ್ಞೆಯಿಂದ ನೋಡಿದರೆ ಇದು ಅಸಂಗತವಾಗಿಯೂ ಕಾಣಬಹುದು. ಬಾಲಿಶ ಅನ್ನಬಹುದು. ಆದರೆ ಐವತ್ತೈದರ ಕತ್ತೆಯಾದ ನಾನು ಮಗುವಂತಾಗುವ ಚಿಕ್ಕ ಅವಕಾಶವನ್ನಾದರೂ ಬಳಸಿಕೊಳ್ಳಬೇಡವೆ? ನಮಗೆ ಸೂರ್ಯನು ಪಥ ಬದಲಿಸುವ ಕ್ರಮ, ಮೋಡಗಳ ಕರವಸ್ತ್ರದಿಂದ ಮುಖ ಮುಚ್ಚಿ ನಾಚಿಕೊಳ್ಳುವುದು, ಅವನ ಮುಗುಳ್ನಗೆ, ಉರಿಮುಖ ಮುಂತಾದ ಸೂರ್ಯನ ದೈನಂದಿನ ಮತ್ತು ವಾರ್ಷಿಕ ದಿನಚರಿ ಗೊತ್ತು. ಸೂರ್ಯ ನನ್ನ ಸಹಪಾಠಿ, ಒಂದೇ ಕ್ಲಾಸು, ಒಂದೇ ಬೆಂಚು ಎಂಬ ಮಹಾನ್‌ಸುಳ್ಳನ್ನು ಹೇಳಿ ಅವಳನ್ನು ಬಹುಕಾಲ ನಂಬಿಸಿದ್ದೆ. ಈಗ ಅವಳ ವೈಜ್ಞಾನಿಕ ಪಾಠಗಳನ್ನು ಬಾಯಿಮುಚ್ಚಿಕೊಂಡು ಕೇಳುತ್ತಿದ್ದೇನೆ. ಹಾಡು ಮಾತ್ರ ಮುಂದುವರಿದಿದೆ. ಹತ್ತನೇ ಕ್ಲಾಸಿಗೆ ಹೊಸ ಹಾಡು ಕಟ್ಟಬೇಕು...
ನಾವು ಮಗುವಾಗಿ ಈ ಭೂಮಿಗೆ ಬಂದಾಗ ಪಂಚೇಂದ್ರಿಯಗಳಿಂದ ಪಂಚಭೂತಗಳನ್ನು ಗ್ರಹಿಸುತ್ತೇವೆ. ರಾಗಭಾವಗಳ ಜೊತೆ ಬೆಳೆಯುತ್ತೇವೆ. ಬಣ್ಣ, ವಾಸನೆ, ಸ್ಪರ್ಶ, ರುಚಿ, ಸದ್ದುಗಳ ಮೂಲಕ ಲೋಕವನ್ನು ಗ್ರಹಿಸುತ್ತೇವೆ. ಅರಿವು ತಲೆಗೆ ಹೊಗುತ್ತಿದ್ದಂತೆ ನಾವೇ ಸರ್ವಸ್ವ ಎಂದುಕೊಳ್ಳುತ್ತೇವೆ. ಇದು ವಿಮಾನದಲ್ಲಿ ಹಾರುವವನು ಭೂಮಿ ಚಿಕ್ಕದು ಎಂದು ಭಾವಿಸಿದಂತೆ. ಆದರೆ ವಿಮಾನವೆಂಬ ಲೋಹಪಕ್ಷಿಗೆ ರೆಕ್ಕೆ ದಣಿವಾಗುತ್ತಿದ್ದಂತೆ, ಇಂಧನ ಮುಗಿಯುತ್ತಿದ್ದಂತೆ ‘ನೆಲದವ್ವ ಇಳಿಸಿಕೊಳ್ಳೇ’ ಎಂದು ಅಂಗಲಾಚುತ್ತದೆ. ನೆಲ ತಾಕಲು ತವಕಿಸುತ್ತದೆ. ಚಿಕ್ಕ ಮಕ್ಕಳನ್ನು ಮೇಲೆ ಎಸೆದು ಎಸೆದು ಆತುಕೊಳ್ಳುವ ತಾಯಂದಿರ ಆಟದಂತೆ ಭೂಮಿ ವಿಮಾನವನ್ನು ಮತ್ತೆ ಮತ್ತೆ ಮೇಲೆಸೆದು ಆತುಕೊಳ್ಳುತ್ತದೆ. ಕೆಲವೊಮ್ಮೆ ಆಯ ತಪ್ಪಿದಾಗ ಭೂಮಿಯ ತಪ್ಪೇನೂ ಇರುವುದಿಲ್ಲ. ಅದು ವಿಮಾನದ ದೋಷ. ಕಾರಣ ಸರಳ -ವಿಮಾನ ಮಾನವ ನಿರ್ಮಿತ; ಭೂಮಿ ಮಾನವ ನಿರ್ಮಿತವಲ್ಲ.
ಹೀಗೆ ನಾವು ಚಿಮ್ಮಿ ಬಿಟ್ಟ ವಿಮಾನಗಳು. ಹಾರುವವರೆಗೂ ಹಾರಾಟ. ಹಾರುವ ಧಿಮಾಕಿನಲ್ಲಿ ನಾವು ಭೂಮಿಯನ್ನೇ ಮರೆತಿದ್ದೇವೆ. ಇಲ್ಲಿ ಭೂಮಿ ಎಂಬುದು ಅಮ್ಮನಂತೆ. ಬೇರಿನಂತೆ. ಬಿಟ್ಟು ಬಂದ ಊರಿನಂತೆ. ಪರಂಪರೆಯ ಬೀಜದಂತೆ. ಹಾರಿದವರೆಲ್ಲ ಇಳಿಯಬೇಕು. ಕೆಲವು ಅಲ್ಪಕಾಲೀನ ಹಾರಾಟ ಕೆಲವು ದೀರ್ಘಕಾಲೀನ ಹಾರಾಟ. ಭೂಸ್ಪರ್ಶ ಅಂತಿಮ ಸತ್ಯ.
*
ನಾನು ಪಿಯುಸಿ ಫೇಲಾಗಿ ಸರ್ವರಿಂದ ಪರಿತ್ಯಕ್ತನಾಗಿ ನೆಲೆ ಹುಡುಕುತ್ತಿದ್ದಾಗ ರಾಜೇಶ್ವರಣ್ಣ ಎಂಬ ಸರಳ ಸಾಮಾನ್ಯ ಮನುಷ್ಯ ಸಿಕ್ಕಿದ್ದರು. ಅವರು ಬೆಂಗಳೂರು ಡೈರಿಯಲ್ಲಿ ಅಧಿಕಾರಿಗಳು. ನನಗೆ ಎಂಥದ್ದಾದರೂ ಒಂದು ಕೆಲಸ ಕೊಡಿ. ಕೆಲಸ ಮಾಡಿಕೊಂಡು ಮುಂದೆ ಓದಬೇಕು ಎಂದು ಬೇಡಿಕೊಂಡಿದ್ದೆ. ಅವರು ಹಳೆಯ ಎಕ್ಸರ್‌ಸೈಜ್ ಪುಸ್ತಕದ ಹಾಳೆ ಹರಿದು ಚೀಟಿ ಬರೆದು ಕೊಟ್ಟಿದ್ದರು. ಓದಲು ಮೈಸೂರು ಸರಿಯಾದ ಜಾಗ. ಮೈಸೂರು ಡೈರಿಯಲ್ಲಿ ದಿನಗೂಲಿ ಮಾಡುತ್ತಾ ಮುಂದೆ ಓದಬಹುದು. ಅಲ್ಲಿ ಮಂಚಯ್ಯನವರನ್ನು ಕಾಣು. ಇಲ್ಲಿ ದಿನಗೂಲಿ ಮೂರು ರೂಪಾಯಿ ಇದೆ. ಅಲ್ಲಿ ಪರವಾಗಿಲ್ಲ. -ನಾಲ್ಕು ರೂಪಾಯಿ ಇದೆ ಎಂದಿದ್ದರು.
ನಾನು ಡೈರಿ ಸೇರಿದ್ದು, ಎಂಎ ಮಾಡಿದ್ದು, ಗಂಗೋತ್ರಿಯಲ್ಲೇ ಸೂಕ್ತ ಜೀವನ ಸಂಗಾತಿ ಆರಿಸಿಕೊಂಡಿದ್ದು, ಅಧ್ಯಾಪಕನಾಗಿದ್ದು, ಸಿನಿಮಾ-, ಟಿ.ವಿ ಮಾಡಿದ್ದು, ಪುಸ್ತಕ ಬರೆದಿದ್ದು... ಈ ಎಲ್ಲದರ ಮೂಲ ರಾಜೇಶ್ವರಣ್ಣ ಎಂಬ ಮಹಾನುಭಾವ. ಅವರೀಗ ತೀರಿಕೊಂಡಿದ್ದಾರೆ. ನನ್ನ ಸ್ವಯಂಕೃಷಿ ಎಷ್ಟೇ ಬೃಹತ್‌ ವೃಕ್ಷದಂತೆ  ಕಂಡರೂ ಮೂಲಬೀಜ ಮಾತ್ರ ರಾಜೇಶ್ವರಣ್ಣ ಮತ್ತು ಅವರ ಒಂದು ಹಳೆಯ ಚೀಟಿ. ಇಂಥ ರಾಜೇಶ್ವರಣ್ಣಗಳು ಒಂದಲ್ಲ ಒಂದು ರೂಪದಲ್ಲಿ ಪ್ರತಿಯೊಬ್ಬರ ಬದುಕಿನಲ್ಲೂ ಇರುತ್ತಾರೆ.
ಕೃತಜ್ಞತೆ ಎಂದರೆ ಅವರದೊಂದು ದೊಡ್ಡ ಫೋಟೊ ಹಾಕಿ ಅದರ ಸುತ್ತ ಮಿಣಮಿಣ ಬಲ್ಬು ಹಾಕಿ ಗಂಧದ ಕಡ್ಡಿ ಹಚ್ಚಿ ಮರೆತುಬಿಡುವುದಲ್ಲ. ಅದು ನಮ್ಮೊಳಗಿನ ಧ್ಯಾನ. ಉಂಡ  ಅನ್ನಕ್ಕೆ, ಬೆಳಕಿಗೆ, ಗಾಳಿಗೆ, ಸಹಾಯ ಹಸ್ತಕ್ಕೆ ತಲೆಬಾಗುವ ಪರಿ. ಪ್ರತಿಯೊಂದನ್ನೂ ಎರವಲು ಪಡೆದಿದ್ದೇವೆ ಎಂಬ ಎಚ್ಚರ. ಶಕ್ತಿಮೀರಿ ಹಿಂತಿರುಗಿಸಬೇಕು ಎಂಬ ನೈತಿಕ ಭಯ.
*
Saint Ambrose ಅನ್ನುವ ಪುರಾತನ ಸಂತ ‘No duty is more urgent than that of returning thanks’ ಎನ್ನುತ್ತಾನೆ. ಜನರಿಂದ ಗೆದ್ದು ಬರುವ ರಾಜಕಾರಣಿ, ಜನರ ಹಣದಿಂದ ಸಂಬಳ, ಸೌಲಭ್ಯ ಪಡೆಯುವ ಅಧಿಕಾರಿ ಈ ಋಣಪ್ರಜ್ಞೆಯನ್ನು ಹೊಂದಿದ್ದರೆ ನಮ್ಮ ಸಮಾಜ ಎಷ್ಟು ಚೆನ್ನಾಗಿರುತ್ತಿತ್ತು.
(Images obtained through Google seach)

No comments:

Post a Comment