Tuesday, December 25, 2012

One and only Dundiraj-1


ಹನಿಗವಿತೆ ಪ್ರಭಾವಶಾಲಿ ಮಾಧ್ಯಮ
-ಡುಂಡಿರಾಜ್


ಕೊಟ್ಟೂರು ೨೫ ಡಿಸೆಂಬರ್ ೨೦೧೨
ಜನರಿಗೆ ಸುಲಭವಾಗಿ ತಲುಪುವ ಹನಿಗವಿತೆಗಳು ಪ್ರಭಾವಿ ಸಾಹಿತ್ಯ ಪ್ರಾಕಾರವಾಗಿವೆ ಎಂದು ಖ್ಯಾತ ಕವಿ  ಎಚ್.ಡುಂಡಿರಾಜ್ ಹೇಳಿದರು.

ಅವರು ಕೊಟ್ಟೂರಿನಲ್ಲಿ ೨೫ ರಂದು ಜರುಗಿದ ಡುಂಡಿರಾಜ್ ಅವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕೂಡ್ಲಿಗಿ ತಾಲೂಕು ಹಾಗೂ ಕೊಟ್ಟೂರು ಹೋಬಳಿ  ಕಸಾಪ ಘಟಕಗಳು ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಗಂಭೀರ ಸಾಹಿತ್ಯವನ್ನು ಓದುವುದಕ್ಕಿಂತ ಹನಿ, ಚುಟುಕುಗಳನ್ನು ಓದುವುದು ಸುಲಭ ಹಾಗೂ ಇವು ತಕ್ಷಣಕ್ಕೆ ಅರ್ಥವಾಗುವಂಥವು. ಅದ್ದರಿಂದ ಹನಿಗವನಗಳು ಹೆಚ್ಚು ಜನರನ್ನು ತಲುಪುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಅನೇಕ ಹನಿಗವಿತೆಗಳು ಬೃಹತ್ ಗ್ರಂಥಗಳ ಸಾರವನ್ನು ಚುಟುಕಾಗಿ ಹೇಳುತ್ತವೆ. ಹನಿಗವಿತೆಗಳ ರಚನೆ ಸುಲಭದ ಕೆಲಸವಲ್ಲ. ಹನಿಗವಿತೆಗಳನ್ನು ಬರೆಯಲು ಸಾಕಷ್ಟು ಸಿದ್ಧತೆ ಬೇಕು ಎಂದು ಅವರು ಯುವಕವಿಗಳಿಗೆ ಕಿವಿಮಾತು ಹೇಳಿದರು. “ಜಗತ್ತಿನ ಶ್ರೇಷ್ಠ ಹನಿಗವನ -ಮೌನ’ ಎಂದು ತಮ್ಮದೇ ಸಾಲನ್ನು ನೆನಪಿಸಿದರು. “ಸಹಜವಾಗಿ ಬರೆದರೆ ಕಾವ್ಯಮಯ; ಒತ್ತಾಯಕ್ಕೆ ಬರೆದರೆ ಕಾವ್ಯ ಮಾಯ!” ಎಂಬುದನ್ನು ಅವರು ಸೂಚ್ಯವಾಗಿ ಹೇಳಿದರು. “ಬೃಹತ್ ಗ್ರಂಥಗಳನ್ನು ಬರೆಯುವ ಮುನ್ನ; ಯೋಚಿಸಿ ಒಂದು ಕ್ಷಣ; ಬರೆಯಿರಿ ಹನಿಗವನ” ಎಂದು ಸಂದೇಶ ನೀಡಿದರು.

ತಾವು ವಿದ್ಯಾರ್ಥಿ ದೆಸೆಯಿಂದಲೇ ಕವಿತೆ ಬರೆದದ್ದು, ಶಾಲೆಯಲ್ಲಿ ಸಂಪಾದಕನಾಗಿ ಕೈಬರಹದ ಪತ್ರಿಕೆ ರೂಪಿಸಿದ್ದು, ನೋಟಿಸ್ ಬೋರ್ಡ್ ನಲ್ಲಿ ಪತ್ರಿಕೆ ಪ್ರಕತಟಿಸುತ್ತಿದ್ದುದನ್ನು ಅವರು ಸಂವಾದ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುತ್ತ ನೆನೆಪಿಸಿಕೊಂಡರು.

ಖ್ಯಾತ ಲೇಖಕ ಕುಂ.ವೀರಭದ್ರಪ್ಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಡುಂಡಿರಾಜ್ ಗೋಪಾಲಕೃಷ್ಣ ಅಡಿಗರಷ್ಟೇ ಮಹತ್ವದ ಕವಿ, ಅವರ  ಕವಿತೆಗಳಲ್ಲಿನ ಪಂಚ್ ಕೋಲ್ಮಿಂಚಿನಂಥದು. ಅವು ಓದುಗನಲ್ಲಿ ತಳಮಳ ಹುಟ್ಟಿಸಿ ಅರಿವು ಮೂಡಿಸಬಲ್ಲವು ಈ ತಲೆಮಾರಿನ ಹನಿಗವಿಗಳಿಗೆ ಡುಂಡಿರಾಜ್ ಭೀಷ್ಮನಂತೆ ಎಂದು ಬಣ್ಣಿಸಿದರು.

ನಗುವುದು ನಗಿಸುವುದು ನಮ್ಮ ಸಂಸ್ಕೃತಿ. ಹಸನ್ಮುಖತೆ ಕನ್ನಡ ಸಂಸ್ಕೃತಿಯ ಅಸ್ತಿಭಾರ. ಆದರೆ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಸಂತೋಷ ಕಾಣುತ್ತಿಲ್ಲ. ಸಾಹಿತ್ಯ ಮನುಷ್ಯನನ್ನು ಪ್ರಸನ್ನ ವದನನನ್ನಾಗಿಸುತ್ತದೆ. ಸಾಹಿತ್ಯ ಮನುಷ್ಯನಿಗೆ ಲಜ್ಜೆಯನ್ನು ತುಂಬುತ್ತದೆ. ಸಾಹಿತ್ಯ ಬಲ್ಲವನು ಭ್ರಷ್ಟನಾಗಲಾರ. ರಾಜಕಾರಣಿಗಳು ಕೆರೆಗಳನ್ನೂ ಡಿನೋಟಿಫೈ ಮಾಡುತ್ತಿದ್ದಾರೆ. ಸಾಹಿತ್ಯದ ಗಂಧ, ಗಾಳಿ ಅರಿಯದವರು ಮಾತ್ರ ಇಂಥ ಕೆಲಸ ಮಾಡಲು ಸಾಧ್ಯ. ಲೇಖಕ ಮೊದಲು ಒಳ್ಳೆಯ ಓದುಗನಾಗಬೇಕು. ಒಂದಕ್ಕಿಂತ ಹೆಚ್ಚು ಭಾಷೆಗಳ ಸಾಹಿತ್ಯ ಓದಬೇಕು. ತಾವು ಒಳ್ಳೆಯ ಕಾದಂಬರಿಗಳನ್ನು ಓದುವುದರ ಮೂಲಕ ತಮ್ಮ ‘ಬ್ಯಾಟರಿ ಚಾರ್ಜ್’ ಮಾಡಿಕೊಳ್ಳುವುದಾಗಿ ಕುಂವೀ ತಿಳಿಸಿದರು.

ಹನಿಗವಿತೆಗಳಿಗೆ ವಿಮರ್ಶೆಯ ನೆರವು ಬೇಕಿಲ್ಲ. ಹನಿಗವಿತೆ ಕನ್ನಡದ ವಿಶಿಷ್ಟ ಪ್ರಾಕಾರ; ಅವುಗಳನ್ನ ರಚಿಸಲು ವಿಶಿಷ್ಟ ಪ್ರತಿಭೆ ಬೇಕು. ಚುಟುಕು ನಮ್ಮೊಳಗೆ ಅರಿವಿನ ದೀಪ ಹಚ್ಚಬಲ್ಲದು ಎಂದು ಕುಂವೀ ಅಭಿಪ್ರಾಯಪಟ್ಟರು.

ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿರಿಗೆರೆ ಎರ್ರಿಸ್ವಾಮಿ ಮಾತನಾಡಿ ಹಾಸ್ಯ ಸಾಹಿತ್ಯ ಲೇಖಕರಿಗೂ ಸಾಹಿತ್ಯ ಅಕಾಡೆಮಿಯು ಪ್ರತಿವರ್ಷ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕೂಡ್ಲಿಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಸ್. ಎಂ. ಗುರುಪ್ರಸಾದ್  ಸ್ವಾಗತಿಸಿದರು. ಕೊಟ್ಟೂರು ಹೋಬಳಿ ಘಟಕದ ಅಧ್ಯಕ್ಷೆ ನಿರ್ಮಲಾ ಶಿವನಗುತ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಕೊಟ್ಟೂರು ಕಲಾ ಕೆಂದ್ರದ ಅಧ್ಯಕ್ಷ ಎಂ.ಎಂ.ಜೆ. ಸತ್ಯಪ್ರಕಾಶ್ ನ್ಯಾಯವಾದಿ ಹೊ.ಮ.ಪಂಡಿತಾರಾಧ್ಯ ಮುಂತಾದವರು ಉಪಸ್ಥಿತರಿದ್ದರು.
 ಸಾಹಿತಿಯೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿರುವ ಖ್ಯಾತಕವಿ ಡುಂಡಿರಾಜ್. ಖ್ಯಾತ ಲೇಖಕ ಕುಂ.ವೀರಭದ್ರಪ್ಪ, ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿರಿಗೆರೆ ಎರ್ರಿಸ್ವಾಮಿ, ಕೂಡ್ಲಿಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಸ್. ಎಂ. ಗುರುಪ್ರಸಾದ್, ಕೊಟ್ಟೂರು ಹೋಬಳಿ ಘಟಕದ ಅಧ್ಯಕ್ಷೆ ನಿರ್ಮಲಾ ಶಿವನಗುತ್ತಿ, ಕಲಾ ಕೆಂದ್ರದ ಅಧ್ಯಕ್ಷ ಎಂ.ಎಂ.ಜೆ. ಸತ್ಯಪ್ರಕಾಶ್ ಉಪಸ್ಥಿತರಿದ್ದರು.
 ‘ಡುಂಡಿರಾಜ್ ರೊಂದಿಗೆ ಸಂವಾದ’ ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸುತ್ತಿರುವ ಖ್ಯಾತ ಲೇಖಕ ಕುಂ.ವೀರಭದ್ರಪ್ಪ. ಖ್ಯಾತಕವಿ ಡುಂಡಿರಾಜ್, ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿರಿಗೆರೆ ಎರ್ರಿಸ್ವಾಮಿ, ಕೂಡ್ಲಿಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಎಸ್. ಎಂ. ಗುರುಪ್ರಸಾದ್, ಕೊಟ್ಟೂರು ಹೋಬಳಿ ಘಟಕದ ಅಧ್ಯಕ್ಷೆ ನಿರ್ಮಲಾ ಶಿವನಗುತ್ತಿ, ಕಲಾ ಕೆಂದ್ರದ ಅಧ್ಯಕ್ಷ ಎಂ.ಎಂ.ಜೆ. ಸತ್ಯಪ್ರಕಾಶ್ ಉಪಸ್ಥಿತರಿದ್ದರು.

No comments:

Post a Comment