Wednesday, May 16, 2012

‌ಬಿ.ಇ. ಪ್ರಾಜೆಕ್ಟ್ ಗಳು ಮಾರಾಟಕ್ಕಿವೆ !

ನೀವು ಓದಲೇಬೇಕಾದ

ಬಿ.. ಅಂತಿಮ ವರ್ಷದ ಪ್ರಾಜೆಕ್ಟ್ ವರ್ಕ್ 


ಕುರಿತು ಬೆಳಕು ಚೆಲ್ಲುವ ವಿಶ್ಲೇಷಣಾತ್ಮಕ ಲೇಖನ 

 HOD ಬರೆದದ್ದು 
‌ಬಿ.. ಪ್ರಾಜೆಕ್ಟ್ ಗಳು ಮಾರಾಟಕ್ಕಿವೆ !
-ಶಶಿಧರ ಎಸ್.ಎಂ.





ತಾಂತ್ರಿಕ ಶಿಕ್ಷಣವೆಂದರೆ ಬರಿಯ ಪುಸ್ತಕದ ಬದನೆಕಾಯಿಯಲ್ಲ! ಆಯಾ ವೃತ್ತಿಗೆ ಅಗತ್ಯವಾದ ಕೌಶಲಗಳನ್ನು ಗಳಿಸಬೇಕು. ಥಿಯರಿಗಿಂತ ಅಲ್ಲಿ ಪ್ರಾಕ್ಟಿಕಲ್ ಜ್ಞಾನವೇ ಮುಖ್ಯ. ವಿದ್ಯಾರ್ಥಿಗಳ ಸೃಜನ ಶೀಲತೆಯನ್ನು ಸಾಣೆ ಹಿಡಿಯುವ; ನಾಲ್ಕು ವರ್ಷಗಳ ಅವಧಿಯ ಬಿ.ಇ. ಕೋರ್ಸಿನಲ್ಲಿ ಕಲಿತ ಜ್ಞಾನವನ್ನು ಒರೆಗೆ ಹಚ್ಚುವ ಅಂತಿಮ ಸೆಮೆಸ್ಟರ್ ನ ಭಾಗವೇ ಪ್ರಾಜೆಕ್ಟ್ ವರ್ಕ್. ವಿದ್ಯಾರ್ಥಿಗಳು ಪ್ರಾಜೆಕ್ಟನ್ನು ತಾವೇ ತಮ್ಮ ಕೈಯಾರೆ ಮಾಡಬೇಕು. ಹೊಸತೇನಾದರೂ ಅಂಶವಿರುವ ತಾಂತ್ರಿಕ ಮಾದರಿಯನ್ನು ರೂಪಿಸಬೇಕು. ಆದರೆ ಈಗ ಆಗುತ್ತಿರುವುದೇನು?

 ವಿದ್ಯಾರ್ಥಿಗಳು ಸುಲಭ ಮಾರ್ಗವನ್ನು ಕಂಡುಕೊಂಡಿದ್ದಾರೆ. ಹಣ ಖರ್ಚು ಮಾಡಿದರೆ ಸಾಕು. ಪ್ರಾಜೆಕ್ಟನ್ನು ಕೊಂಡು ತಂದು ಬಿಡಬಹುದು. ರೆಡಿಮೇಡ್ ಅಂಗಿ-ಪ್ಯಾಂಟ್ ಸಿಗುವಂತೆ ಪ್ರಾಜೆಕ್ಟ್ ಗಳು ಲಭ್ಯವಾಗುತ್ತಿವೆ. ಅದಕ್ಕಾಗಿ ನೂರಾರು ‘ಪ್ರಾಜೆಕ್ಟ್  ಅಂಗಡಿ’ಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಕೋಟ್ಯಾಂತರ ರೂಪಾಯಿಗಳ ದಂಧೆ ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ಪ್ರಾಜೆಕ್ಟ್ ಮಾದರಿಯನ್ನಷ್ಟೇ ಅಲ್ಲ, ಸಂಪೂರ್ಣ ವರದಿಯನ್ನೂ, ಪಿಪಿಟಿ ಪ್ರೆಜೆಂಟೇಶನನ್ನು,  ಪರೀಕ್ಷೆಯಲ್ಲಿ ಕೇಳಬಹುದಾದ ಸಂಭಾವ್ಯ ಪ್ರಶ್ನೋತ್ತರಗಳನ್ನೂ, ಅಗತ್ಯ ತರಬೇತಿಯನ್ನೂ ಒದಗಿಸಲಾಗುತ್ತಿದೆ.

ಬೆಂಗಳೂರಿನ ಪ್ರತಿಷ್ಟಿತ ಕಾಲೇಜೊಂದರಲ್ಲಿ ಓದುತ್ತಿರುವ ಸುರೇಶ ಎಂಬ ವಿದ್ಯಾರ್ಥಿಯನ್ನು ಈ ಬಗ್ಗೆ ಮಾತನಾಡಿಸಿದಾಗ; “ನಮಗೆ ಪ್ರಾಯೋಗಿಕ ಕೌಶಲಗಳನ್ನು ಸರಿಯಾಗಿ ಕಲಿಸಿಲ್ಲ. ಅಧ್ಯಾಪಕರು ಪಠ್ಯಪುಸ್ತಕದಲ್ಲಿರುವುದನ್ನು ಬೋರ್ಡ್ ಮೇಲೆ ಬರೆಯುವುದನ್ನೇ ಬೋಧನೆ ಎಂದುಕೊಂಡಿದ್ದಾರೆ; ಅವರಲ್ಲೇ ಪರಿಣತಿಯಿಲ್ಲ, ಅವರದ್ದೇ ಕಳಪೆ ಗುಣಮಟ್ಟ.  ಅಧ್ಯಾಪಕರು ಮಾಡಲಾಗದ್ದನ್ನು ನಾವು ಮಾಡಬೇಕೆಂದು ನಿರೀಕ್ಷಿಸುವುದು ಸರಿಯೇ?”

ಕಳೆದ ವರ್ಷ ಉದಯ ಎಂಬ ವಿದ್ಯಾರ್ಥಿ ಪ್ರಾಜೆಕ್ಟ್ ಪರೀಕ್ಷೆಯಲ್ಲಿ 100ಕ್ಕೆ 99 ಅಂಕ ಗಳಿಸಿದ. ಅವನ ಪ್ರಾಜೆಕ್ಟ್ ತುಂಬಾ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಸತ್ಯವೇನೆಂದರೆ ಅವನು ಪರೀಕ್ಷೆಗಳ ಮೂರು ತಿಂಗಳ ಮುಂಚೆ ಬೆಂಗಳೂರಿನ ಜಯನಗರದ ಬೀದಿಗಳಲ್ಲಿ ಅಲೆದು ರೆಡಿಮೇಡ್ ಪ್ರಾಜೆಕ್ಟ್ ನ್ನು ಕೊಂಡು ತಂದಿದ್ದ. ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿಯೊಬ್ಬ ಹೇಳಿದ್ದು: “ನಾವು ರೆಡಿಮೇಡ್ ಪ್ರಾಜೆಕ್ಟ್ ನ್ನು ಕೊಂಡು ತರುತ್ತೇವೆ, ಏಕೆಂದರೆ ಅವನ್ನು ಉದ್ಯಮದಲ್ಲಿ ಪರಿಣತಿಯುಳ್ಳ ತಜ್ಞರು ನಿರ್ಮಿಸಿರುತ್ತಾರೆ. ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ಪ್ರಾಜೆಕ್ಟ್ ಕಾರ್ಯ ನಿರ್ವಹಿಸುವುದೋ ಇಲ್ಲವೋ ಎಂಬ ಚಿಂತೆ ಇರುವುದಿಲ್ಲ. ಅವನ್ನು ವೃತ್ತಿಪರರು ರೂಪಿಸಿರುತ್ತಾರೆ”

ಬೆಂಗಳೂರಿನ ಜಯನಗರ, ವಿಜಯನಗರ, ಕೆಂಗೇರಿ, ಯಲಹಂಕ ಮುಂತಾದ ಭಾಗಗಳಲ್ಲಿ ಸಂಚರಿಸಿದರೆ ಸರಿಯಾದ ಗಾಳಿ-ಬೆಳಕು ಇಲ್ಲದ ಪುಟ್ಟ ಕೋಣೆಗಳಲ್ಲಿ ಕಾರ್ಯ ನಿರ್ವಹಿಸುವ   ‘ಪ್ರಾಜೆಕ್ಟ್  ಅಂಗಡಿಗಳು ಕಾಣಸಿಗುತ್ತವೆ.  ಸಣ್ಣಸೈಜಿನ ಸಾಫ್ಟ್ ವೇರ್ ಕಂಪನಿಗಳೆಂಬಂತೆ ಕಾಣುತ್ತವೆ. ಅವು ಜೆರಾಕ್ಸ್, ಇಂಟರ್ನೆಟ್ ಕೆಫೆಗಳಾಗಿಯೂ ಏಕಕಾಲದಲ್ಲಿ ಕಾರ್ಯನಿರ್ವಹಿಸಬಹುದು. ಇದೊಂದು ಸೀಸನ್ ವ್ಯಾಪಾರವಾಗಿದ್ದು ಮಾರ್ಚ್ ನಿಂದ ಮೇ ತಿಂಗಳವರೆಗೆ ಭರಾಟೆ ವ್ಯಾಪಾರವಾಗುತ್ತದೆ. ಜೂನ್ ನಲ್ಲಿ ನೋಡಿದರೆ ಅಲ್ಲಿ ಈ ವ್ಯಾಪಾರ ನಡೆದ ಕುರುಹೂ ಕಾಣಸಿಗುವುದಿಲ್ಲ!   

ಅಂಗಡಿಯನ್ನು ಪ್ರವೇಶಿಸಿದರೆ ನಿಮ್ಮನ್ನು ಸ್ವಾಗತಿಸಿ, ಲಭ್ಯವಿರುವ ಪ್ರಾಜೆಕ್ಟ್ ಗಳ ಪಟ್ಟಿಯಿರುವ ಆಕರ್ಷಕ ಪುಸ್ತಿಕೆಯನ್ನು ಅಂಗಡಿಯಾತ ನಿಮ್ಮ ಕೈಗಿಡುತ್ತಾನೆ.  ನಿಮಗೆ ಇಷ್ಟವಾಗುವ ಟೈಟಲ್ ನ್ನು ಆಯ್ದುಕೊಂಡು ಬೆಲೆಯ ವಿವರ ಪಡೆಯಬಹುದು. ಸಾಮಾನ್ಯವಾಗಿ 8 ಸಾವಿರದಿಂದ  15 ಸಾವಿರದವರೆಗೆ ರೇಂಜ್. ಬಿ.ಇ. ಪ್ರಾಜೆಕ್ಟ್ ನ್ನು ಮೂರು ಅಥವಾ ನಾಲ್ಕು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸೇರಿ ನಿರ್ಮಿಸುತ್ತಾರೆ. ಹಾಗಾಗಿ ಅ ಬೆಲೆ ಅವರಿಗೆ ಭಾರವೇನೂ ಆಗದು; ತಲಾ 5-6 ಸಾವಿರ ರೂಪಾಯಿಗಳ ವೆಚ್ಚವಷ್ಟೇ. ಪ್ರಾಜೆಕ್ಟ್ ಗೆ ‘ಒಂದೇ ದರ’ ಎಂಬ ನಿಯಮವೇನೂ ಇಲ್ಲ. ಚೌಕಾಶಿಗೆ ಅವಕಾಶವಿದೆ. ಹಾರ್ಡ್ ವೇರ್ ಪ್ರಾಜೆಕ್ಟ್ ಆದರೆ ಡೆಲಿವರಿಗೆ ಸಮಯ ತೆಗೆದು ಕೊಳ್ಳುತ್ತಾನೆ. ಪ್ರಾಜೆಕ್ಟ್ ಬೆಲೆಯ ಅರ್ಧದಷ್ಟನ್ನು ಮುಂಗಡವಾಗಿ  ಪಾವತಿಸಬೇಕು. ಸಾಫ್ಟವೇರ್ ಪ್ರಾಜೆಕ್ಟ್ ಆದರೆ ತಕ್ಷಣವೇ ನಿಮ್ಮ ಪೆನ್ ಡ್ರೈವ್ ನಲ್ಲೆ ಎಲ್ಲವನ್ನೂ ತಗೊಂಡು ಹೋಗಬಹುದು.

ಎಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕ ಸುನೀಲ್ ಕುಮಾರ್ ರನ್ನು ಈ ವಿದ್ಯಮಾನದ ಬಗ್ಗೆ ಪ್ರಶ್ನಿಸಿದಾಗ “ಸೋಮಾರಿ ವಿದ್ಯಾರ್ಥಿಗಳು ಮಾತ್ರ ಹೀಗೆ ಮಾರುಕಟ್ಟೆಯಿಂದ ಪ್ರಾಜೆಕ್ಟ್ ತರುತ್ತಾರೆ. ಸ್ವಂತ ಪ್ರಾಜೆಕ್ಟ್ ರೂಪಿಸುವುದರಲ್ಲಿ ಇರುವ ತೃಪ್ತಿ, ಸಂತೋಷಗಳ ಅರಿವು  ಅವರಿಗೆ ಇರುವುದಿಲ್ಲ; ಕೇವಲ ಒಂದು ಕಪ್ ಕಾಫಿ ಸ್ವಂತ ತಯಾರಿಸಿದಾಗ ಎಂಥದೋ ಒಂದು ಆನಂದವಾಗುತ್ತದೆ; ಅದೇ ಒಂದು ತಾಂತ್ರಿಕ ಅವಿಷ್ಕಾರಕ್ಕೆ ಒಡ್ಡಿಕೊಳ್ಳುವ, ದುಡಿಯುವ ಆನಂದಕ್ಕೆ ಪಾರವೆಲ್ಲಿ? ವಿದ್ಯಾರ್ಥಿಗಳು ಅರಿಯಬೇಕು; ಮುಂದೆ ವೃತ್ತಿ  ಜೀವನದಲ್ಲಿ ಹೀಗೆ ನಿಮಗೆ ರೆಡಿಮೇಡ್ ಪ್ರಾಜೆಕ್ಟ್ ಸಿಗಲಾರವು!”

ಈ  ಬಗ್ಗೆ ವಿಶ್ವವಿದ್ಯಾಲಯ ಏನು ಮಾಡುತ್ತಿದೆ ಅಂತ ನೋಡಿದರೆ, ಪ್ರಾಜೆಕ್ಟ್ ವ್ಯಾಪಾರ ಅವರ ಗಮನಕ್ಕೆ ಬಂದಿರುವುದು ನಿಜ; ಆದರೆ ಇಂಥ  ಪ್ರಾಜೆಕ್ಟ್ ವ್ಯಾಪಾರದಲ್ಲಿ ಭಾಗಿಯಾಗಿರುವ ಖಾಸಗಿ ಸಂಸ್ಥೆಗಳ ಮೇಲೆ ಕಡಿವಾಣ ಹಾಕುವ ಕ್ರಮ ಅವರ ವ್ಯಾಪ್ತಿಯಲ್ಲಿಲ್ಲ. ­­­­ಆದರೂ, ಹೀಗೆ ಕೊಂಡು  ತಂದ ಪ್ರಾಜೆಕ್ಟ್ ಗಳನ್ನು  ಪರೀಕ್ಷಕರು ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಸೂಕ್ತವಾಗಿ ವಿದ್ಯಾರ್ಥಿಗಳ ‘ಮೌಲ್ಯ ಮಾಪನ’ ಮಾಡುತ್ತಾರೆ ಎಂಬುದು ಅವರ ಅಭಿಪ್ರಾಯ. ಆದರೂ ‘ವಿದ್ಯಾರ್ಥಿಗಳು ಪ್ರಾಜೆಕ್ಟ್ ನ್ನು ಹೊರಗೆ ಮಾಡಬಾರದು. ಕಾಲೇಜಿನಲ್ಲಿಯೇ ಮಾಡಬೇಕು’ ಎಂಬ ಸುತ್ತೋಲೆಯನ್ನು ಕೆಲವು ವಿಶ್ವವಿದ್ಯಾಲಯಗಳು  ಹೊರಡಿಸಿ ಸುಮ್ಮನಾಗಿವೆ. 


ಪ್ರಾಜೆಕ್ಟ್ ವಹಿವಾಟು ನಡೆಸುತ್ತಿರುವ ಶ್ರೀನಿವಾಸ ಎಂಬ ಬಿ.ಇ. ಪದವಿಧರ ಹೇಳುವ ಪ್ರಕಾರ ಕಾಲೇಜಿನಲ್ಲಿ ಪ್ರಾಜೆಕ್ಟ್ ಮಾರ್ಗದರ್ಶನ ಮಾಡುವ ಅಧ್ಯಾಪಕರಿಗೆ, ವಿದ್ಯಾರ್ಥಿಗಳು ರೆಡಿ ಮೇಡ್ ಪ್ರಾಜೆಕ್ಟ್ ತರುವ ಬಗ್ಗೆ ಸಂಪೂರ್ಣ ಅರಿವಿರುತ್ತದೆ. ಮೌನ  ಸಮ್ಮತಿಯೂ ಇರುತ್ತದೆ. ಏಕೆಂದರೆ ಅವರು ನಿರ್ವಹಿಸಬೇಕಾದ ಕೆಲಸ ಸುಗಮವಾಗುತ್ತದೆ. ಅಷ್ಟೇ ಅಲ್ಲ; ಎಷ್ಟೋ ಅಧ್ಯಾಪಕರು ಇಂಥದೇ ಕಂಪನಿಯಿಂದ ಪ್ರಾಜೆಕ್ಟ್ ತನ್ನಿ ಎಂದು ತಮ್ಮ ವಿದ್ಯಾರ್ಥಿಗಳಿಗೆ ಸೂಚಿಸುತ್ತಾರೆ. ಅಂಥ ಪ್ರಾಜೆಕ್ಟ್ ಕಂಪನಿಗೂ ಹಾಗೂ ಅಧ್ಯಾಪಕರಿಗೂ ಒಳಒಪ್ಪಂದವಿದ್ದು, ಲಾಭದಲ್ಲಿ ಅಧ್ಯಾಪಕರಿಗೂ ಪಾಲು ಸಂದಾಯವಾಗುತ್ತದೆ. ಕೆಲವೆಡೆ ಅಧ್ಯಾಪಕರೇ ಬೇನಾಮಿ ಹೆಸರಿನಲ್ಲಿ ಪ್ರಾಜೆಕ್ಟ್ ಅಂಗಡಿಗಳನ್ನು ನಡೆಸುವುದುಂಟು.

ತಮಿಳು ನಾಡಿನಲ್ಲಿ ಪ್ರಾಜೆಕ್ಟ್ ವ್ಯಾಪಾರ ಬಹು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ಚೆನೈ ನಗರದ ಟಿನಗರ, ಪಾಂಡಿ ಬಜಾರ್, ರಿಚಿ ರಸ್ತೆ ಮತ್ತು ಕೊಯಮತ್ತೂರಿನ ಗಾಂಧಿಪುರಂ, ಟೌನ್ ಹಾಲ್ ಪ್ರದೇಶಗಳು ಪ್ರಾಜೆಕ್ಟ್ ಅಂಗಡಿಗಳ ತವರೂರಾಗಿವೆ. ಕರ್ನಾಟಕದ ಹುಬ್ಬಳ್ಳಿ, ಗುಲ್ಬರ್ಗ ಬಳ್ಳಾರಿ, ಮಂಗಳೂರು ಮುಂತಾದ ನಗರಗಳಲ್ಲೂ ಪ್ರಾಜೆಕ್ಟ್ ಅಂಗಡಿಗಳು ತಲೆಯೆತ್ತಿವೆ. ಅಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಂದ ಅರ್ಡರು ಪಡೆದುಕೊಂಡು ಬೆಂಗಳೂರು, ಚೆನ್ನೈ ನಗರಗಳಿಂದ ಪ್ರಾಜೆಕ್ಟ್ ಗಳನ್ನು ತರಿಸಿಕೊಡುವ ಬ್ರೋಕರ್ ಗಳಿದ್ದಾರೆ.

ಪ್ರಿನ್ಸಿಪಾಲ್ ಡಾ.ವಿಜಯ ಶಂಕರ್ ಅಭಿಪ್ರಾಯಪಟ್ಟಂತೆ ಸಾಫ್ಟ್ ವೇರ್  ಪ್ರಾಜೆಕ್ಟ್ ಗಳನ್ನು  ಕೊಂಡುತರುವುದಷ್ಟೇ ಅಲ್ಲ; ಇಂಟರ್ನೆಟ್  ನಿಂದಲೂ  ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಕಾಪಿ ಪೇಸ್ಟ್ – ಕೃತಿ ಚೌರ್ಯ ಎಲ್ಲೆಡೆ ಸಾಮಾನ್ಯವಾಗಿದೆ. ಪ್ರಾಜೆಕ್ಟ್ ವ್ಯಾಪಾರ, ಇಂಟರ್ನೆಟ್ ಡೌನ್ ಲೋಡ್ ನಿಂದ ಪ್ರತಿ ಕಾಲೇಜಿನಲ್ಲೂ ಒಂದೇ ಬಗೆಯ ಪ್ರಾಜೆಕ್ಟ್ ಗಳನ್ನು ನೋಡುತ್ತೇವೆ.

ಯಾರೋ ಮಾಡಿದ್ದನ್ನು ತಾವೇ ಮಾಡಿದ್ದು ಎಂದು ಸುಳ್ಳು ಹೇಳಿಕೊಂಡು ಪಾಸಾಗುವ ವಿದ್ಯಾರ್ಥಿಗೆ ಶ್ರದ್ಧೆ, ಪರಿಶ್ರಮಗಳ ಬೆಲೆ ಅರ್ಥವಾದೀತು ಹೇಗೆ! 

ಪ್ರಾಜೆಕ್ಟ್ ವರ್ಕ್ ಎಂಬುದು ಇಂದು ಬಿ.ಇ. ಪದವಿ ಪಡೆಯಲು ಕೇವಲ ಒಂದು ಫಾರ್ಮಲಿಟಿಯಾಗಿಬಿಟ್ಟಿದೆ. ಅದರ ಮೂಲ ಉದ್ದೇಶದಿಂದ ವಿಮುಖವಾಗಿದೆ. ವಿಶ್ವವಿದ್ಯಾಲಯಗಳು ಈ ಬಗ್ಗೆ ಏನನ್ನಾದರೂ ಮಾಡಬಹುದಾದದ್ದಿದೆ. ಮೊದಲು ಅಧ್ಯಾಪಕರನ್ನು ಚುರುಕುಗೊಳಿಸಬೇಕಾಗಿದೆ. ಅವರಿಗೆ ವೃತ್ತಿಪರ ಕೌಶಲಗಳನ್ನು ಕಲಿಸಬೇಕಾಗಿದೆ. ಉದ್ಯಮ-ಶಿಕ್ಷಣ ಸಂಸ್ಥೆಗಳ ನಡುವೆ ಬಾಂಧವ್ಯ ಬೆಸೆಯಬೇಕಾಗಿದೆ. ಎಂಜಿನೀಯರಿಂಗ್ ನಲ್ಲಿ ಯಶಸ್ಸು ಕೇವಲ ನೆನಪಿನ ಸಾಮರ್ಥ್ಯದ ಮೇಲೆ ಅವಲಂಬಿತವಾಗಬಾರದು. ಪ್ರತಿವರ್ಷ ೫ ಲಕ್ಷಕ್ಕೂ ಹೆಚ್ಚು ತಾಂತ್ರಿಕ ಪದವೀಧರ ಹೊರಬರುತ್ತಿದ್ದಾರೆ. ತಾಂತ್ರಿಕ ಪದವೀಧರರಲ್ಲಿ ಕೇವಲ 25%ರಷ್ಟು ಮಾತ್ರ ಉದ್ಯೋಗ ಪಡೆಯಲು ಸಮರ್ಥರಿದ್ದಾರೆ ಎಂದು ನ್ಯಾಸ್ ಕಾಂ ಸಂಸ್ಸ್ಥೆ ಅಧ್ಯಯನ ಮಾಡಿ ವರದಿ ನೀಡಿದೆ. ತಾಂತ್ರಿಕ ಶಿಕ್ಷಣವು   ಗುಣಮಟ್ಟ ಸುಧಾರಣೆಯ ಮೂಲಕ ಪುನರುತ್ಥಾನಗೊಳ್ಳಬೇಕಾಗಿದೆ.

ಉದ್ಯಮಶೀಲತೆಗೆ ಪ್ರಾಜೆಕ್ಟ್ ಪ್ರೇರಣೆ
ಕರ್ಣಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (KSCST)ಯು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವವನ್ನು ಉತ್ತೇಜಿಸುವ ದೃಷ್ಟಿಯಿಂದ ಎಸ್.ಪಿ.ಪಿ. ಎಂಬ ವಾರ್ಷಿಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಹೊಸ ಬಗೆಯ ಪ್ರಾಜೆಕ್ಟ್ ಗಳಿಗೆ ಧನ ಸಹಾಯ ನೀಡುತ್ತದೆ. ಪ್ರಾಜೆಕ್ಟ್ ಪ್ರದರ್ಶನ ಏರ್ಪಡಿಸಿ ಶ್ರೇಷ್ಠ ಪ್ರಾಜೆಕ್ಟ್ ಗಳನ್ನು ನಿರ್ಮಿಸಿದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿಗಳನ್ನೂ ನೀಡುತ್ತದೆ. ಕಳೆದ ವರ್ಷದ ಪ್ರದರ್ಶನದಲ್ಲಿ ‘ಶ್ರೇಷ್ಠ ಕಾಲೇಜ್’ ಪ್ರಶಸ್ತಿ ಗಳಿಸಿದ ಹೊಸಪೇಟೆಯ ಪಿ.ಡಿ.ಐ.ಟಿ.ಯ, ಐ.ಟಿ. ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಶೇಖರ್ ಅವರನ್ನು ಮಾತನಾಡಿಸಿದಾಗ: “ಪ್ರಾಜೆಕ್ಟ್ ಬಿ.ಇ. ಕೋರ್ಸಿನ ಬಹು ಮುಖ್ಯ ಭಾಗ. ಅಧ್ಯಾಪಕರು ಮನಸು ಮಾಡಿದರೆ ವಿದ್ಯಾರ್ಥಿಗಳು ಉತ್ತಮ ಪ್ರಾಜೆಕ್ಟ್ ನ್ನು ತಾವೆ ನಿರ್ಮಿಸುವಂತೆ ಮಾಡುವುದು ಅಸಾಧ್ಯವೇನಲ್ಲ. ನಿಜಜೀವನದ ಸಮಸ್ಯೆಗಳಿಗೆ ತಾಂತ್ರಿಕತೆಯ ಮೂಲಕ ಪರಿಹಾರ ಹುಡುಕುವ ತುಡಿತವನ್ನು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಉತ್ತಮ ಪ್ರಾಜೆಕ್ಟ್ ನಿರ್ಮಿಸಿದ ಅನೇಕ ವಿದ್ಯಾರ್ಥಿಗಳು ಮುಂದೆ ತಾವೇ ಉದ್ಯಮ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಉದ್ಯಮಶೀಲತೆಗೆ ಪ್ರಾಜೆಕ್ಟ್ ಪ್ರೇರಣೆ ನೀಡುತ್ತದೆ”
ಎಬಿವಿಪಿ ಕೂಡಾ ಸೃಷ್ಟಿ ಎಂಬ ವಾರ್ಷಿಕ ಪ್ರಾಜೆಕ್ಟ್ ಮೇಳವನ್ನು ಆಯೋಜಿಸುತ್ತಿದೆ. ಸೃಜನಶೀಲ ಪ್ರಾಜೆಕ್ಟ್ಗಳನ್ನು ನಿರ್ಮಿಸುವ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುತ್ತಿದೆ.



 ಇಲ್ಲಿ ಪ್ರಾಜೆಕ್ಟ್ ಎಂಬುದು ಐಚ್ಚಿಕ
ಪ್ರಾಜೆಕ್ಟ್ ನಿರ್ಮಿಸಲು ವಿದ್ಯಾರ್ಥಿಗಳಲ್ಲಿ ತುಡಿತ, ಹಂಬಲಗಳಿರಬೇಕು. ಒತ್ತಾಯ, ಒತ್ತಡಗಳಿಂದ ವಿದ್ಯಾರ್ಥಿಗಳನ್ನು ಆವಿಷ್ಕಾರದ ಹಾದಿಯಲ್ಲಿ  ನಡೆಸಲಾಗದು. 3-4 ವಿದ್ಯಾರ್ಥಿಗಳ ಪ್ರಾಜೆಕ್ಟ್ ಬ್ಯಾಚಿನಲ್ಲಿ ಒಬ್ಬರೋ ಇಬ್ಬರೋ ಮಾತ್ರ ಕ್ರಿಯಾಶೀಲರಾಗಿರುತ್ತಾರೆ. ಉಳಿದವರು ಏನೂ ಮಾಡದೇ ಲಾಭ ಪಡೆಯುತ್ತಾರೆ.
ಈ ಅಂಶಗಳನ್ನು ಪರಿಗಣಿಸಿಯೋ ಎಂಬಂತೆ ಚೆನ್ನೈನ ಐ.ಐ.ಟಿ.ಯಲ್ಲಿ ಈ ವರ್ಷದಿಂದ ಪ್ರಾಜೆಕ್ಟ್ ನ್ನು ಐಚ್ಚಿಕ ವಿಷಯವಾಗಿ ಮಾಡಲಾಗಿದೆ. ಪ್ರಾಜೆಕ್ಟ್ ಬೇಡವೆನ್ನುವವರು ಬೇರೆ ಮೂರು ಥಿಯರಿ ವಿಷಯಗಳನ್ನು ಓದಿ ಉತ್ತೀರ್ಣರಾಗಬೇಕು.