Friday, August 24, 2012

ಜ್ಞಾನವೇ ಜಗತ್ತನ್ನು ಅಳುವ ಶಕ್ತಿ

“ಇಂದು ಜ್ಞಾನವೇ ಜಗತ್ತನ್ನು ಅಳುವ ಶಕ್ತಿ”
-ಬಸವರಾಜ ಬೊಮ್ಮಾಯಿ
 



“ಹಿಂದೆ ಅರಸರು ಭೂಮಿಯ ಒಡೆತನದ ಮೂಲಕ ಆಳ್ವಿಕೆ ನಡೆಸಿದರು. ಬ್ರಿಟಿಷರು ತಮ್ಮ ವ್ಯಾಪಾರಿ ಬುದ್ಧಿಯ ಮೂಲಕ ವಿಶ್ವವನ್ನೇ ಆಳಿದರು. ಆದರೆ ಬದಲಾಗಿರುವ ಇಂದಿನ ಜಗತ್ತಿನಲ್ಲಿ ಜ್ಞಾನದ ಸುತ್ತ ಶಕ್ತಿಯ ಕೇಂದ್ರೀಕರಣವಾಗುತ್ತಿದೆ. ಇಂದು ಜ್ಞಾನವೇ ಜಗತ್ತನ್ನು ಅಳುವ ಶಕ್ತಿಯಾಗಿದೆ” ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು ಆಭಿಪ್ರಾಯಪಟ್ಟರು.

 ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ವಿವಿಧ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಗ್ರಂಥಾಲಯ ಕಟ್ಟಡ, ವಿಜಯನಗರ ಕಾಲೇಜಿನ ಸ್ನಾತಕೋತ್ತರ  ಕಟ್ಟಡ, ಮುನಿರಾಬಾದಿನ ವಿಜಯನಗರ ಸಂ. ಪ.ಪೂ. ಕಾಲೇಜಿನ ಕಟ್ಟಡಗಳನ್ನು ಸಚಿವರು ಉದ್ಘಾಟಿಸಿದರು.

“ವಿದೇಶೀ ಪ್ರಧಾನಿಗಳು ಬೆಂಗಳೂರಿಗೆ ಭೇಟಿ ನೀಡಿದಾಗ ವಿಧಾನ ಸೌಧ ಹಾಗೂ ಮೈಸೂರಿನ ಅರಮನೆಯನ್ನು ಸಂದರ್ಶಿಸುವ ಪರಿಪಾಠವಿತ್ತು. ಆದರೆ ಕಳೆದ ಏಳೆಂಟು ವರ್ಷಗಳಿಂದ ಈ ಗಣ್ಯರು ಇನ್ಫೋಸಿಸ್, ವಿಪ್ರೋ ಕಂಪೆನಿಗಳಿಗೂ ಭೇಟಿ ನೀಡುತ್ತಿದ್ದಾರೆ. ಹಿಂದೆ ಬಿಲ್ ಕ್ಲಿಂಟನ್ ಮತ್ತು ಬಿಲ್ ಗೇಟ್ಸ್ ಇವರಿಬ್ಬರ ಮಧ್ಯೆ ಯಾರು ಹೆಚ್ಚು ಜನಪ್ರಿಯರು ಎಂಬ ಜನಾಭಿಪ್ರಾಯ ಸಮೀಕ್ಷೆ ನಡೆಸಿದಾಗ ಬಿಲ್ ಗೇಟ್ಸ್ ಹೆಚ್ಚು ಜನಪ್ರಿಯರು ಎಂಬ ಅಂಶ ಹೊರಬಂದಿತು. ಇದು ಆಡಳಿತದ ಆಚೆಗೆ ಜ್ಞಾನವೇ  ಶಕ್ತಿ ಕೇಂದ್ರವಾಗುತ್ತಿರುವುದರ ದಿಕ್ಸೂಚಿಯಾಗಿದೆ” ಎಂದು ತಿಳಿಸಿದರು.

“ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಶ್ನೆಗಳೇ ಯಶಸ್ಸಿನ ಸೂತ್ರಗಳು.  ತಾರ್ಕಿಕ  ಚಿಂತನೆ ಹಾಗೂ ವಿಶ್ಲೇಷಣಾ ಸಾಮರ್ಥ್ಯಗಳು ಪ್ರಶ್ನಿಸುವ ಮೂಲಕವೇ ಬೆಳೆಯುತ್ತವೆ. ಶಿಕ್ಷಕರು  ವಿದ್ಯಾರ್ಥಿಗಳ ಪ್ರಶ್ನಿಸುವ ಮನೋಭಾವವನ್ನು ಉತ್ತೇಜಿಸಬೇಕು” ಎಂದೂ ಅವರು ತಿಳಿಸಿದರು.

“ಒಮ್ಮೆ ವಿದ್ಯಾರ್ಥಿಯಾದರೆ ಕೊನೆಯ ಉಸಿರಿನವರೆಗೂ ನೀವು ವಿದ್ಯಾರ್ಥಿಗಳೇ. ಜೀವನದ ಪರೀಕ್ಷೆಗಳಿಗೆ ಸಿಲಬಸ್ ಇರುವುದಿಲ್ಲ. ಗುರುಗಳೂ ಇರುವುದಿಲ್ಲ, ಅದಕ್ಕಾಗಿ ನೀವು ಸನ್ನದ್ಧರಾಗಬೇಕು. ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು, ವಿದ್ಯೆಯೊಂದಿಗೆ ವಿನಯವನ್ನೂ ಮೈಗೂಡಿಸಿಕೊಳ್ಳಬೇಕು” ಎಂದು ಅವರು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.

“ಭವ್ಯ ಇತಿಹಾಸ ಹೊಂದಿರುವ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಭವ್ಯ ಭವಿಷ್ಯವಿದೆ. ಹಿಂದುಳಿದ ಬಳ್ಳಾರಿ ಪ್ರದೇಶದಲ್ಲಿ ಜಾಗತಿಕ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ವೀ.ವಿ ಸಂಘದ ಕಾರ್ಯ ಶ್ಲಾಘನೀಯ” ಎಂದು ಅವರು ಬಣ್ಣಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ವೀ.ವಿ ಸಂಘವನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ನೆನಪಿಸಿಕೊಂಡರು. ವೀ.ವಿ ಸಂಘದ ಮಾಜಿ ಅಧ್ಯಕ್ಷ ಕೋಳೂರು ಬಸವನಗೌಡ ಮಾತನಾಡಿ ಲಾಭದ ಆಕಾಂಕ್ಷೆಯಿಲ್ಲದೆ, ವಾಣಿಜ್ಯೀಕರಣಗೊಳಿಸದೆ ಸಮಾಜದ ಎಲ್ಲಾ ಜನವರ್ಗಗಳ ಏಳಿಗೆಗಾಗಿ ಸಂಘ ದುಡಿಯುತ್ತಿದೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ವೀ.ವಿ ಸಂಘದ ಅಧ್ಯಕ್ಷರಾದ ಅಲ್ಲಂ ಗುರುಬಸವರಾಜ ಮಾತನಾಡಿ ಸಂಘ ಸಾಗಿ ಬಂದ ದಾರಿಯನ್ನು ಸ್ಮರಿಸಿಕೊಂಡರು. ಸಂಘವು ಮತ್ತಷ್ಟು ಸ್ಫೂರ್ತಿಯಿಂದ ಶಿಕ್ಷಣದ ಕೈಂಕರ್ಯದಲ್ಲಿ ತೊಡಗಿಕೊಳ್ಳಲಿದೆ ಎಂದು ನುಡಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕೊಟ್ಟೂರುಸ್ವಾಮಿ ಮಠದ ಜಗದ್ಗುರು ಶ್ರೀ ಸಂಗನಬಸವ ಸ್ವಾಮಿಗಳು ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಸಮಾಜಮುಖಿ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ವೈಜ್ಞಾನಿಕ ಯುಗದಲ್ಲಿ ಯುವಜನರು, ತಾಂತ್ರಿಕ ಉಪಕರಣಗಳ ಗುಲಾಮರಾಗುತ್ತಿದ್ದಾರೆ. ಕ್ಯಾಸೆಟ್ ಹಾಡಿಗೆ ನರ್ತಿಸುವ ಗೀಳು ಎಲ್ಲೆಡೆ ಹೆಚ್ಚುತ್ತಿದೆ. ಸ್ವತಹ ಹಾಡಿ ನರ್ತಿಸುವ ಪ್ರತಿಭೆ ನಿಮ್ಮಲ್ಲಿದೆ. ನಿಮ್ಮ ಪ್ರತಿಭೆ ಸದಭಿರುಚಿಯದಾಗಿರಲಿ; ಸದುಪಯೋಗವಾಗಲಿ ಎಂದು ಹೇಳಿದರು.

೯೬ ವರ್ಷಗಳ ಸುಧೀರ್ಘ ಇತಿಹಾಸ ಹೊಂದಿ, ಶತಮಾನದ ಹೊಸ್ತಿಲಲ್ಲಿರುವ ವೀ.ವಿ ಸಂಘ ವೈದ್ಯಕೀಯ ಕಾಲೇಜು ಸ್ಥಾಪಿಸಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಕೊಪ್ಪಳದ ಶಾಸಕ ಕರಡಿ ಸಂಗಣ್ಣ , ಅಲ್ಲಂ ದೊಡ್ಡಪ್ಪ, ವೀ.ವಿ ಸಂಘದ ಉಪಾಧ್ಯಕ್ಷ ಮಹೇಶ್ವರ ಸ್ವಾಮಿ, ಕೋಶಾಧಿಕಾರಿ ಹಿಮಂತರಾಜ, ವೀ.ವಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರು ಮುಂತಾದ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವೀ.ವಿ ಸಂಘದ ಗೌರವ ಕಾರ್ಯದರ್ಶಿ ಗುರುಸಿದ್ಧ ಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಕೊನೆಯಲ್ಲಿ ಸಹಕಾರ್ಯದರ್ಶಿ ನೇಪಾಕ್ಷಪ್ಪ ವಂದನಾರ್ಪಣೆ ಸಲ್ಲಿಸಿದರು. ಪ್ರಾಧ್ಯಾಪಕರಾದ ಡಾ. ಶಿವಾನಂದ ಹಾಗೂ ಡಾ.ಶರಣ ಬಸಮ್ಮ ಕಾರ್ಯಕ್ರಮ ನಿರೂಪಣೆ ಮಾಡಿದರು.


“ಮೂರು ವರ್ಷಗಳಲ್ಲಿ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ತುಂಗಭದ್ರಾ ಎಡದಂಡೆ ನಾಲೆಯನ್ನು ಆಧುನೀಕರಣಗೊಳಿಸಲಾಗಿದೆ.  ಇದರಿಂದ ಒಂದೂವರೆ ಲಕ್ಷ ಎಕರೆ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆತಿದೆ. ಆರು ಟಿ.ಎಂ.ಸಿ. ನೀರು ಉಳಿಸಿದ ಈ ಕೆಲಸ ತೃಪ್ತಿ ತಂದಿದೆ” ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು ತಿಳಿಸಿದರು.

“ಹಳೆಯ ವಿಜಯನಗರ ಕಾಲುವೆಗಳನ್ನು ಆಧುನಿಕರಣಗೊಳಿಸುವ ತುರ್ತು ಅಗತ್ಯವಿದೆ. ಅದಕ್ಕಾಗಿ ೩೦೦ ಕೋಟಿ ರೂಪಾಯಿಗಳ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ವರ್ಷದಲ್ಲಿಯೇ ಆ ಕೆಲಸಕ್ಕೂ ಚಾಲನೆ ನೀಡಲಾಗುವುದು” ಎಂದು ಬಸವರಾಜ ಬೊಮ್ಮಾಯಿಯವರು ತಿಳಿಸಿದರು.

“ತುಂಗಭದ್ರಾ ಜಲಾಶಯದ ಹೂಳು ತೆಗೆಸುವ ಕಾರ್ಯಕ್ಕೆ ಖಾಸಗಿ ಕಂಪೆನಿಯೊಂದರ ಜೊತೆ ಒಪ್ಪಂದಕ್ಕೆ ಬರಲಾಗಿದೆ. ಕೆಲವೇ ತಿಂಗಳುಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಈ  ಕಾರ್ಯಕ್ಕೆ ಚಾಲನೆ ನೀಡಲಾಗುವುದು” ಎಂದು ಬಸವರಾಜ ಬೊಮ್ಮಾಯಿಯವರು ತಿಳಿಸಿದರು.


 
 
























1 comment: